ತಿರುಮಲರಾಯ
1570-1578 . ವಿಜಯನಗರದ ಇತಿಹಾಸದಲ್ಲಿ ಅರವೀಡು ಮನೆತನದ ಸ್ಥಾಪಕನೆಂದು ಪ್ರಸಿದ್ಧನಾದ ವ್ಯಕ್ತಿ. ಕೃಷ್ಣದೇವರಾಯನ ಅಳಿಯ ರಾಮರಾಯನ ತಮ್ಮ; ಕೃಷ್ಣದೇವರಾಯನ ಇನ್ನೊಬ್ಬ ಅಳಿಯ; ಅವನ ಎರಡನೆಯ ಮಗಳನ್ನು ಮದುವೆಯಾಗಿದ್ದ. 1565ರ ತಾಳೀಕೋಟೆ ಕದನದಲ್ಲಿ ವಿಜಯನಗರಕ್ಕೆ ಹಠಾತ್ತಾಗಿ ಸೋಲಾದಾಗ ತಿರುಮಲರಾಯ ಮತ್ತು ಅವನ ಇನ್ನೊಬ್ಬ ಸೋದರ ವೆಂಕಟಾದ್ರಿ ರಾಜಧಾನಿಗೆ ಹಿಂದಿರುಗಿದರು. ವೆಂಕಟಾದ್ರಿ ಸಾಮ್ರಾಜ್ಯದ ಸಂಪತ್ತನ್ನು ಚಂದ್ರಗಿರಿಗೆ ಸಾಗಿಸಿದ. ಆರು ತಿಂಗಳ ಸತತ ಲೂಟಿಗೆ ಒಳಗಾದ ರಾಜಧಾನಿಯ ಪುನರುಜ್ಜೀವನಕ್ಕಾಗಿ ತಿರುಮಲರಾಯ ಮಾಡಿದ ಪ್ರಯತ್ನ ವ್ಯರ್ಥವಾಯಿತು. ಜನ ಅಲ್ಲಿಗೆ ಬಂದು ನೆಲಸಲಿಲ್ಲ. ಚಂದ್ರಗಿರಿಯಲ್ಲಿದ್ದ ನಾಮಮಾತ್ರ ದೊರೆ ಸದಾಶಿವರಾಯನನ್ನು ಈತ ಕರೆತಂದು ಪೆನುಕೊಂಡೆಯನ್ನು ಆಡಳಿತಕೇಂದ್ರ ಮಾಡಿಕೊಂಡ. ಅಳಿಯ ರಾಮರಾಯನ ಅನಂತರ ತಿರುಮಲನೇ ಸರ್ವಾಧಿಕಾರಿಯಾಗಿದ್ದ. 1570ರಲ್ಲಿ ಸದಾಶಿವರಾಯ ಕೊಲೆಗೀಡಾದಾಗ ತಿರುಮಲ ವಿಧಿವತ್ತಾಗಿ ಪಟ್ಟವೇರಿ ಅರವೀಡು ವಂಶಸ್ಥಾಪಕನಾದ.

ತಿರುಮಲರಾಯ ಪಟ್ಟಕ್ಕೆ ಬಂದಾಗ ದಕ್ಷಿಣದ ಹಲವು ಮಾಂಡಲಿಕರು ಇವನಿಗೆ ತಲೆಬಾಗಲಿಲ್ಲ. ಮಧುರೈ, ತಂಜಾವೂರು, ಮತ್ತು ಜಿಂಜಿಯ ನಾಯಕರು ಸ್ವತಂತ್ರರಾದರು. ವೈಸೂರು, ಕೆಲದಿ ಮತ್ತು ವೆಲ್ಲೂರಿನ ಆಡಳಿತ ಮನೆತನಗಳು ಮಾತ್ರ ತಿರುಮಲರಾಯರನ್ನು ಸಾರ್ವಭೌಮನೆಂದು ಅಂಗೀಕರಿಸಿದುವು. ತಿರುಮಲರಾಯ ಸಮರ್ಪಕ ಆಡಳಿತ ಸ್ಥಾಪಿಸುವ ಯತ್ನದಲ್ಲಿ ರಾಜ್ಯವನ್ನು ಕನ್ನಡ, ತೆಲುಗು ಮತ್ತು ತಮಿಳು ಭಾಷೆಗಳ ಮೂರು ಮುಖ್ಯ ಮಂಡಲಗಳನ್ನಾಗಿ ವಿಂಗಡಿಸಿದ, ತನ್ನ ಮೂವರು ಗಂಡು ಮಕ್ಕಳನ್ನು ಮೂರು ಮಂಡಲಗಳ ರಾಜಪ್ರತಿನಿಧಿಗಳಾಗಿ ನೇಮಿಸಿದ. ಮೊದಲನೆಯ ಮಗನಾದ ಶ್ರೀರಂಗ ತೆಲುಗುಪ್ರಾಂತ್ಯದ ಮಂಡಲಾಧಿಪನಾಗಿ ಪೆನುಕೊಂಡೆಯಿಂದಲೂ ಎರಡನೆಯವನಾದ ರಾಮರಾಯ ಕನ್ನಡ ಪ್ರಾಂತ್ಯವನ್ನು ಶ್ರೀರಂಗಪಟ್ಟಣದಿಂದಲೂ ಕೊನೆಯ ಮಗನಾದ ವೆಂಕಟಾದ್ರಿ ತಮಿಳು ಮಂಡಲವನ್ನು ಚಂದ್ರಗಿರಿಯಿಂದಲೂ ಆಳುತ್ತಿದ್ದರು. ಆಗಿನ ಕಾಲದಲ್ಲಿ ದಕ್ಷಿಣದ ಸುಲ್ತಾನರಲ್ಲಿ ಪರಸ್ಪರ ಕಲಹಗಳು ಬೆಳೆದದ್ದರಿಂದ ತಿರುಮಲ ಅವರ ದಾಳಿಗಳಿಗೆ ಒಳಗಾಗಲಿಲ್ಲ. ರಾಜ್ಯದಲ್ಲಿ ನೆಮ್ಮದಿ ನೆಲಸಿತು. ವಿಜಯನಗರದ ಎಲ್ಲ ಪ್ರದೇಶಗಳನ್ನಲ್ಲದಿದ್ದರೂ ಬಹುಪಾಲನ್ನು ಈತ ತನ್ನ ಅಧಿನಕ್ಕೆ ತಂದುಕೊಂಡಿದ್ದ. ವೃದಾಪ್ಯ ಬಂದ ಮೇಲೆ ತಿರುಮಲ ತನ್ನ ಕೊನೆಗಾಲದಲ್ಲಿ ಹಿರಿಯ ಮಗ ಶ್ರೀ ರಂಗನಿಗೆ ಪಟ್ಟ ಬಿಟ್ಟುಕೊಟ್ಟನೆಂದು ಹೇಳಲಾಗಿದೆ.
(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ